ಭೂ ವಂದನ - 24 : ಬನ್ನಿ ಹಸಿರು ಸೇನಾನಿಯಾಗೋಣ... Bhoo Vandana 24

ಭೂ ವಂದನ - 24 : ಬನ್ನಿ ಹಸಿರು ಸೇನಾನಿಯಾಗೋಣ... Bhoo Vandana 24
ಭೂ ವಂದನ - 24 : ಬನ್ನಿ ಹಸಿರು ಸೇನಾನಿಯಾಗೋಣ... Bhoo Vandana 24
Published on

ಪ್ರಮುಖ ಮುಖ್ಯಾಂಶಗಳು

  • ಯುಗಾದಿ ಹಬ್ಬವನ್ನು ನೆನ್ನೆ ಮೊನ್ನೆಯಷ್ಟೇ ಆಚರಿಸಿದ್ದೇವೆ
  • ಚೈತ್ರದ ಆಗಮನದಿಂದ ಮರಗಳೆಲ್ಲ ಹಸಿರಿನಿಂದ ನಳನಳಿಸುತ್ತಿವೆ
  • ಮರದ ಮೇಲೆಲ್ಲೋ ಕುಳಿತ ಕೋಗಿಲೆ ವಸಂತದ ಆಗಮನವನ್ನು ಸಂಭ್ರಮಿಸುತ್ತಿದೆ
  • ಇಚ್ಛಾಶಕ್ತಿಯ ಮೂಲಕ ಪರಿಸರದಲ್ಲಿ ಬದಲಾವಣೆಗಳನ್ನು ತರಲು ನಾವೆಲ್ಲರು ಮನಸ್ಸು ಮಾಡಬೇಕಿದೆ
ನಾವೀಗ ಸರ್ಕಾರ ಮಾಡಲಿ, ಕಾರ್ಪೋರೇಟ್ ಸಂಸ್ಥೆಗಳು ಮಾಡಲಿ ಎಂದು ಕಾಯುತ್ತ ಕೂರುವುದಕ್ಕಿಂತ ನಾನೇನು ಮಾಡಲಿ ಎಂದು ಯೊಚಿಸಲಾರಂಭಿಸಬೇಕಿದೆ. ಇಚ್ಛಾಶಕ್ತಿಯ ಮೂಲಕ ಪರಿಸರದಲ್ಲಿ ಬದಲಾವಣೆಗಳನ್ನು ತರಲು ಯತ್ನಿಸಿದ ಹಲವರು ನಮ್ಮ ಮುಂದೆ ನಿಲ್ಲುತ್ತಾರೆ. ಟ್ರಾಫಿಕ್ ಜಾಮ್, ರಸ್ತೆಯ ತಗ್ಗು ಗುಂಡಿಗಳಿಗಾಗಿಯೇ ಸದಾ ಸುದ್ದಿಯಲ್ಲಿರುವ ರಾಜ್ಯದ ರಾಜಧಾನಿ ಬೆಂಗಳೂರು ಕಳೆದ ತಿಂಗಳು ಗುಲಾಬಿ ಬಣ್ಣದ ಮೇಲುಹೊದಿಕೆಯನ್ನು ಹೊದ್ದು ಸುಂದರವಾಗಿ ಸಿಂಗರಿಸಿಕೊಂಡಿದ್ದ ನೋಡಿ ಎಲ್ಲರೂ ಸoಭ್ರಮಿಸಿದೆವಷ್ಟೇ! ಈ ‘ಪಿಂಕ್’ ಸೌಂದರ್ಯದ ಹಿಂದಿನ ರುವಾರಿ ರಾಜ್ಯದ ವಿವಿಧೆಡೆ ಉಪ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಸೇವೆ ಸಲ್ಲಿಸಿ ಬೆಂಗಳೂರನ್ನು 'ಗಾರ್ಡನ್ ಸಿಟಿ' ಯಾಗಿಯೇ ಉಳಿಸುವತ್ತ ಶ್ರಮಿಸಿದ ದಿ.ಎಸ್.ಜಿ. ನೇಗಿನಹಾಳರು ರಾಜ್ಯ ಕಂಡ ಅಪರೂಪದ ಅಧಿಕಾರಿ. ಗಿಡ ನಡೆವ ಚಟುವಟಿಕೆ ಅದರಲ್ಲೂ ಬೆಂಗಳೂರಲ್ಲಿ ಹೊಸದಲ್ಲವಾದರೂ, ಸುಮಾರು 1.5 ಮಿಲಿಯನ್ ಗಿಡಗಳನ್ನು ನೆಡೆಸುವ ಮುನ್ನ ನೇಗಿನಹಾಳರು ಪ್ರತಿಮನೆಯ ಮನೆಯ ಬಾಗಿಲ ತಟ್ಟಿ ಆ ಮನೆಯವರಿಗೆ ಯಾವ ಗಿಡ ಬೇಕೋ ಆ ಗಿಡವನ್ನೇ ಅವರ ಮನೆಯ ಮುಂದೆ ನಡೆಸಿದ ಸೂಕ್ಷ್ಮತೆಯವರು. ಸಸಿಯ ರಕ್ಷಣೆಯ ಜವಾಬ್ದಾರಿಯನ್ನು ಮನೆಯವರಿಗೇ ಕೊಟ್ಟು ವೈಯುಕ್ತಿಕ ಪರಿಸರ ಜವಾಬ್ಧಾರಿಯನ್ನು ಜನರಲ್ಲಿ ಮೂಡಿಸಿದವರು. ಅವರು ನಡೆಸಿದ 150 ಗಿಡಗಳ ಪ್ರಬೇಧಗಳಲ್ಲಿ ರೇನ್ ಟ್ರೀ, ಆಕಾಶ ಮಲ್ಲಿಗೆ, ಬೊಗನ್ ವಿಲ್ಲಾ, ಟಬೆಬುಯಾ ರೋಸಿಯಾ ಆಡು ಭಾಷೆಯಲ್ಲಿ ಗುಲಾಬಿ ಮರಗಳೇ ಹೆಚ್ಚಾಗಿದ್ದ ಕಾರಣ ನಗರ ಪ್ರತಿ ಜನವರಿ-ಫೆಬ್ರುವರಿಯಲ್ಲಿ ಗುಲಾಬಿ, ಹಳದಿ, ನೀಲಿ ಬಣ್ಣಗಳಿಂದ ಸಿಂಗಾರ ಗೊಂಡು ಎಲ್ಲರ ಗಮನ ಸೆಳೆಯುತ್ತದೆ. ಈ ಬಾರಿ ಅದು ಎಲ್ಲರ ಗಮನ ಹೆಚ್ಚಿನ ಪ್ರಮಾಣದಲ್ಲಿ ಸೆಳೆದಿದ್ದು, ನಗರದ ಉಸಿರು ಉಳಿಸಲು ಶ್ರಮಿಸಿದ ಅಧಿಕಾರಿಯ ಆತ್ಮಕ್ಕೆ ಕೊಂಚ ಮಟ್ಟಿಗೆ ತೃಪ್ತಿಯಾಗಿರಬೇಕು. ಅಧಿಕಾರ ದೊರೆತರೂ ಹೀಗೆ ಬಂದು ಹಾಗೆ ಹೋಗುವ ಅನೇಕರ ನಡುವೆ ನೇಗಿನಹಾಳ್, 'ಗಿಡಗಳೇ ಮೊದಲು' ಎನ್ನುವ 'ಡಾ.ಎಲ್ಲಪ್ಪರೆಡ್ಡಿಯಂತಹ ಅಧಿಕಾರಿಗಳು ಅಪರೂಪವೆನ್ನಿಸುತ್ತಾರೆ.
ವ್ಯಕ್ತಿಯೊಬ್ಬ ತಾನೇನು ಮಾಡಬಲ್ಲ ಎನ್ನುವುದಕ್ಕೆ ಬೆಂಗಳೂರಿನ ಹೊರವಲಯದಲ್ಲಿರುವ ಸೊಲದೇವನ ಹಳ್ಳಿಯ ಸಮೀಪದಲ್ಲಿರುವ ಆಚಾರ್ಯ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಉತ್ತಮ ಉದಾಹರಣೆ. ತಮ್ಮ ಶಿಕ್ಷಣ ಸಂಸ್ಥೆಗಳಿಗೆ ಹೋಗುವ ರಸ್ತೆಯುದ್ದಕ್ಕೂ ಬೇವಿನ ಸಸಿಗಳನ್ನು ನಡೆಸಿ ಪೋ‍ಷಿಸುವತ್ತ ಸಂಸ್ಥೆಯನ್ನು ಆರಂಭಿಸುವಾಗಲೇ ಯೋಚಿಸಿದ ಸಂಸ್ಥಾಪಕ ಪ್ರೇಮ್ ನಾಥ್ ರೆಡ್ಡಿಯವರ ಪರಿಶ್ರಮವನ್ನು ನಾವು ಮೆಚ್ಚಲೇಬೇಕು. ಇದೀಗ ಕಡ್ಡಾಯವಾಗಿರುವ ಮಳೆನೀರ ಕೋಯ್ಲಿನ ಜೊತೆಗೆ ಕಾಲೇಜುಗಳ ಕಟ್ಟಡಗಳನ್ನು ಕಟ್ಟುವಾಗಲೇ ಸೂಕ್ತ ರೀತಿಯಲ್ಲಿ ಯೋಜನೆ ಮಾಡಿ, ಹಾಸ್ಟೆಲ್, ಕಾಲೇಜುಗಳು ಮತ್ತು ಕ್ಯಾಂಟೀನ್ನಿಂದ ಹರಿದು ಬರುವ ತ್ಯಾಜ್ಯ ನೀರಿನ ಮರುಬಳಕೆಯನ್ನು ಆರಂಭಿಕ ಹಂತದಿಂದಲೇ ಯೋಜಿಸಿದ್ದು ಸಂಸ್ಥೆಯ ಮುಖ್ಯಸ್ಥರ ಪರಿಸರ ಕುರಿತ ಕಾಳಜಿಯ ಮನೋಭಾವಕ್ಕೆ ಕನ್ನಡಿ ಹಿಡಿಯುತ್ತದೆ.
ನಿಜ ಖಾಸಗಿ ಕಂಪನಿಗಳು ಮತ್ತು ಸರ್ಕಾರದ ಯೋಜನೆಗಳು ಪರಿಸರ ಸಮಸ್ಯೆಗಳಿಗೆ ಹೆಚ್ಚಿನ ಪ್ರಮಾಣದ ಪರಿಣಾಮ ಬೀರುವ ಸಾಮರ್ಥ್ಯವನ್ನು ಹೊಂದಿದೆ. ಆದರೆ ಹವಾಮಾನ ಬದಲಾವಣೆಯನ್ನು ಸಶಕ್ತವಾಗಿ ಎದುರಿಸುವಲ್ಲಿ ಜನರಲ್ಲಿ ಜಾಗೃತವಾಗಿ ವೈಯಕ್ತಿಕ ಪರಿಸರ ಜವಾಬ್ದಾರಿಯನ್ನು ಪ್ರದರ್ಶಿಸುವುದು ಹೆಚ್ಚಿನ ಮಹತ್ವವನ್ನು ಪಡೆಯುತ್ತದೆ. ಪರಿಸರದ ಉಳಿವಿಗಾಗಿ ಕೋಟ್ಯಂತರ ಜನಸಂಖ್ಯೆಯಲ್ಲಿರುವ ನಾವು 'ಕಾರ್ಬನ್ ಫುಟ್ ಪ್ರಿಂಟ್ಸ' ನ್ನು ಕಡಿಮೆ ಮಾಡುವತ್ತದ ಪ್ರತಿ ಹೆಜ್ಜೆಯೂ ಪರಿಣಾಮಕಾರಿ. ಪ್ರತಿ ವ್ಯಕ್ತಿಯ ಸಣ್ಣ ಸಣ್ಣ ಆಯ್ಕೆಗಳು ಕೂಡ ಸಮೂಹ ಮಟ್ಟದಲ್ಲಿ ಮಹತ್ವದ ಬದಲಾವಣೆಯನ್ನು ತರಬಲ್ಲವು. ಯೋಚಿಸಿ ನೋಡಿ ಗ್ರಾಹಕರಾಗಿ ನಾವು ಮಾಡುವ ಪ್ರತಿ ಆಯ್ಕೆಯೂ ಮಾರುಕಟ್ಟೆಗೆ ಸ್ಪಷ್ಟ ಸಂದೇಶವನ್ನು ಕಳುಹಿಸುತ್ತವೆ. ಜನರು ಪರಿಸರ ಸ್ನೇಹಿ ಉತ್ಪನ್ನಗಳನ್ನು ಹೆಚ್ಚು ಆಯ್ಕೆ ಮಾಡಿದಾಗ, ಕಂಪನಿಗಳೂ ತಾವು ಉತ್ಪಾದಿಸುವ ಉತ್ಪನ್ನಗಳು ಗ್ರಾಹಕರ ಆಯ್ಕೆಯಂತೆಯೇ ಸಾಗುತ್ತದೆನ್ನುವುದಕ್ಕೆ ಉದಾಹರಣೆ ನಮ್ಮ ಮನೆಗಳಿಗೆ ಬರುತ್ತಿರುವ ಪೇಪರ್ ಬ್ಯಾಗುಗಳು ಅಥವಾ ಪ್ಲಾಸ್ಟಿಕ್ ಚೀಲಗಳ ಗುಣಮಟ್ಟ. ಹಾಗೆಯೇ ನಾವು ಮಾಡುವ ಖರೀದಿಯನ್ನು ಹೊತ್ತು ತರುವ ಪೇಪರ್ ಬ್ಯಾಗುಗಳೂ ನಮಗೆ ಬೇಡ ಎನ್ನುವ ಪರ್ಯಾಯ ವ್ಯವಸ್ಥೆಯನ್ನೂ ಆನ್​ಲೈನ್ ಆ್ಯಪ್​ಗಳು ನೀಡುತ್ತಿವೆಯೆನ್ನುವುದನ್ನೂ ನಾವು ಗಮನಿಸಬಹುದು.
ಇನ್ನು ಎರಡನೆಯದಾಗಿ ಪರಿಸರ ಸ್ನೇಹಿ ಅಭ್ಯಾಸಗಳನ್ನು ಅನುಸರಿಸುವ ಮೂಲಕ ನಮಗೆ ಆಗಿರುವ ಹಣ, ಆರೋಗ್ಯ ಮತ್ತು ಅನುಕೂಲತೆಯ ಕಾರಣ ನಮಗೆ ಆಗಿರುವ ಲಾಭಗಳನ್ನು ಹಂಚಿಕೊಳ್ಳುವ ಮೂಲಕವೂ ನಾವು ವೈಯುಕ್ತಿಕ ಪರಿಸರ ಜವಾಬ್ದಾರಿಯನ್ನು ನಿಭಾಯಿಸಬಹುದು. ಈಗಂತೂ ಸಾಮಾಜಿಕ ಜಾಲ ತಾಣಗಳು ಮಾಹಿತಿಯನ್ನು ಅತಿ ವೇಗದಲ್ಲಿ ಪಸರಿಸುತ್ತದೆ. ಉದಾಹರಣೆಗೆ ಹಾಲಿನ ಪ್ಯಾಕೆಟ್ ನ್ನು ನಾವು ಕತ್ತರಿಸುವ ವಿಧಾನ. ಸಣ್ಣ ಚೂರು ಪ್ಲಾಸ್ಟಿಕ್ ತುಣುಕೂ ಭೂಮಿಗೆ ಸೇರದ ನಮ್ಮ ಜವಾಬ್ದಾರಿಯುತ ನಡೆಯ ಆಯ್ಕೆ ಇತರರಿಗೂ ಮಾರ್ಗದರ್ಶನ ನೀಡೀತು!
ಪರಿಸರದತ್ತ ನಮ್ಮ ಪ್ರತಿ ಹೆಜ್ಜೆಯೂ ಎಚ್ಚರಿಕೆಯದ್ದಾಗಿರಬೇಕು. ಕಾರಣ ಪರಿಸರ ಸಮಸ್ಯೆಯ ಪರಿಣಾಮ ಎಲ್ಲ ಜೀವಿಗಳ ಮೇಲೆ ಸಮಾನವಾಗಿರುವುದಿಲ್ಲ. ಹವಾ ಮಾಲಿನ್ಯ, ನದಿಗಳಲ್ಲಿ ನಾವೆಸೆಯುವ ತ್ಯಾಜ್ಯ ಕೇವಲ ಮಾನವರಿಗಷ್ಟೇ ಅಲ್ಲದೇ ವನ್ಯ ಸಂಪತ್ತಿಗೂ ತೊಂದರೆಯುoಟುಮಾಡುತ್ತದೆ. ವೈಯಕ್ತಿಕ ಪರಿಸರ ಜವಾಬ್ದಾರಿಯ ಅಡಿಯಲ್ಲಿ ನಾವು ನೀರನ್ನು ಮಿತವಾಗಿ ಬಳಸುವ, ಅಗತ್ಯವಿಲ್ಲದ ವಿದ್ಯುತ್ ಸಾಧನಗಳನ್ನು ಆರಿಸುವುದು, ವಸ್ತುಗಳ ಪುನ: ಬಳಕೆಯತ್ತ ಗಮನ ಹರಿಸುವುದು. ನಮ್ಮ ಮನೆಯಲ್ಲೊಂದು ತೋಟ ಮಾಡುವುದು, ಮನೆಯ ಮುಂದಿನ ಸರ್ಕಾರಿ ಸಾಲು ಮರದ ಪೋಷಣೆ, ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡುವುದು, ಸಾಧ್ಯವಾದರೆ ಸರ್ಕಾರಿ ಸಾರಿಗೆಯನ್ನು ಬಳಸುವುದು, ಕಸದ ಸೂಕ್ತ ನಿರ್ವಹಣೆ... ಹೀಗೆ ಅನೇಕ ಸಣ್ಣ ಪ್ರಯತ್ನಗಳು ಪರಿಸರದತ್ತದ ನಮ್ಮ ವೈಯಕ್ತಿಕ ಜವಾಬ್ದಾರಿಯ ಮೂಲ ಅಂಶಗಳಾಗುತ್ತವೆ.
ಅಧಿಕಾರ, ಹಣವಿಲ್ಲದೇ ಪರಿಸರಕ್ಕಾಗಿ ಒಬ್ಬ ಸಾಧಾರಣ ವ್ಯಕ್ತಿಯಾಗಿ ನಾವೇನ ಮಾಡಬಲ್ಲೆವು ಎನ್ನುವುದಕ್ಕೆ ತುಳಸಿ ಗೌಡ, ಸಾಲು ಮರದ ತಿಮ್ಮಕ್ಕರ ನಿಸ್ವಾಥ೯ ಹಸಿರು ಪ್ರೇಮ ಸಾಕ್ಷಿ. ಅವರಂತೆಯೇ ಎಲೆ ಮರೆಯ ಕಾಯಂತೆ ಪರಿಸರದ ಉಳುವಿಕೆಗಾಗಿ ತಮ್ಮ ಅಳಿಲು ಸೇವೆ ಸಲ್ಲಿಸುತ್ತಿರುವ ಹಲವರು ನಮ್ಮ ನೆರೆ ಮನೆಯಲ್ಲಿಯೇ ಇದ್ದಾರೆ. ಅವರನ್ನು ಗುರುತಿಸೋಣ ಮಾದರಿಯಾಗಿ ಅನುಸರಿಸೋಣ. ಬೇರೆಯವರನ್ನು ಟೀಕೆ ಮಾಡುತ್ತ, ಇತರರಿಗೆ ಉಪದೇಶಿಸುತ್ತ, ಅಥವಾ ಕಾಣಿಸದoತೆ ಕೂರುವ ಬದಲು ನಾವೇನು ಮಾಡಬಹುದು ಎಂದು ಯೋಚಿಸಿ, ಮುಂದುವರೆದು ಕೆಲಸ ಮಾಡಿದರೆ, ಮಾತಿನ ಶ್ರಮವೂ ಉಳಿಯುತ್ತದೆ ಅಲ್ಲವೇ? ಪ್ರತಿಯೊಬ್ಬರೂ ಹಸಿರು ಸೇನಾನಿಗಳಾಗೋಣ.

ಲೇಖಕರ ಪರಿಚಯ

ಲೇಖಕರು ನಂದಿನಿ ಲಕ್ಷ್ಮೀಕಾಂತ್. ಆರೋಗ್ಯ ಸಂಶೋಧಕರು, ಬರಹಗಾರರು ಮತ್ತು ಸಂವಹನಕಾರರು. ICSSR ಇವರನ್ನು ಹಿರಿಯ ಸoಶೋಧಕಿಯೆಂದು ಗುರುತಿಸಿದೆ. ಶ್ರೀ ಚಿದಂಬರ ರಿಸಚ್೯ ಮತ್ತು ಡೆವಲಪ್ಮೆಂಟ್, ಗುಬ್ಬಿ, ಇದರ ಕಾಯ೯ನಿವಾ೯ಹಕರು. ರಚಯಿತಾ ಟ್ರಸ್ಟ್​ನ ಸಂಸ್ಥಾಪಕರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net